ಭಗವಾನ್, ಎಸ್ ಕೆ
(1933- ). ಕನ್ನಡ ಚಿತ್ರರಂಗದಲ್ಲಿ ಅವಳಿ ನಿರ್ದೇಶಕರಲ್ಲಿ ಒಬ್ಬರಾದ ಎಸ್.ಕೆ. ಭಗವಾನ್ ಮೈಸೂರಿನವರು. ತಂದೆ ಬ್ಯಾಂಕ್ ಉದ್ಯೋಗಿ ಎಸ್.ಕೃಷ್ಣಸ್ವಾಮಿ. ತಾಯಿ ರಂಗನಾಯಕಮ್ಮ. ಹುಟ್ಟಿದ್ದು 1933ರ ಜುಲೈ 5ರಂದು. ಬಾಲ್ಯದಿಂದಲೇ ಸಂಗೀತ ಸಾಹಿತ್ಯದಲ್ಲಿ ಆಸಕ್ತಿ. ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ ಬೆಂಗಳೂರಿನಲ್ಲಿ. ಚಿನ್ನದ ಬಣ್ಣದ ಚೆಲುವ; ನಾಟಕ ಪ್ರಿಯ. ನಾಟಕಗಳಲ್ಲಿ ಸ್ತ್ರೀಪಾತ್ರಗಳಲ್ಲಿ ಇವರಿಗೇ ಮೀಸಲು. ವೃತ್ತಿ ರಂಗಭೂಮಿಯಲ್ಲಿ ಅವಕಾಶ ಪ್ರಾಪ್ತಿ. ಹಿರಣ್ಣಯ್ಯ ಮಿತ್ರ ಮಂಡಲಿ ಪ್ರವೇಶ. ದೇವದಾಸಿಯಲ್ಲಿ ವಿಮಲೆಯ ಪಾತ್ರ, ಕರ್ನಾಟಕ ನಾಟಕ ಮಂಡಲಿಯಲ್ಲಿ ಗುಲೇಬಕಾವಲಿ ಮುಖ್ಯ ಪಾತ್ರ; ಜನಪ್ರಿಯ.

ಬೆಂಗಳೂರಿನ ಪ್ರಮುಖ ಚಲನಚಿತ್ರ ವಿತರಕರಾದ ಪ್ರಕಾಶ್ ಪಿಕ್ಚರ್ಸ್‍ನಲ್ಲಿ ಸಂಸ್ಥೆಯ ಪ್ರತಿನಿಧಿಯಾಗಿ ಊರೂರು ಸುತ್ತುವ ಕೆಲಸ. ಎ.ಸಿ. ನರಸಿಂಹಮೂರ್ತಿ, ಭಕ್ತವತ್ಸಲ ನಿರ್ಮಿಸಿದ ಭಾಗ್ಯೋದಯ ಚಿತ್ರಕ್ಕಾಗಿ (1956) ಕಣಗಾಲ್ ಪ್ರಭಾಕರ ಶಾಸ್ತ್ರಿಗಳ ಸಾಹಿತ್ಯ ರಚಿಸುವಾಗ ಅವರೊಂದಿಗೆ ಸಹಾಯಕರಾಗಿ ಕೆಲಸ ಮಾಡಿದರು. ಇದು ಚಲನಚಿತ್ರ ನಿರ್ಮಾಣ ಪಾತ್ರದಲ್ಲಿ ಭಗವಾನ್ ಅವರಿಗೆ ದೊರೆತ ಮೊದಲ ಅವಕಾಶ. ಜಗಜ್ಯೋತಿ ಬಸವೇಶ್ವರ ಚಲನಚಿತ್ರ ನಿರ್ಮಾಣವಾಗುತ್ತಿರುವಾಗ ಬಿ. ದೊರೈರಾಜ್ ಅವರ ಪರಿಚಯವಾಗಿ ಆ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಅವಕಾಶ ಭಗವಾನ್ ಅವರಿಗೆ ದೊರೆಯಿತು. ನಂತರ ದೊರೈರಾಜ್-ಭಗವಾನ್ ಜೋಡಿ ಕೆಲವು ಚಿತ್ರಗಳಿಗೆ ಛಾಯಾಗ್ರಹಣ ಮತ್ತು ಸಹಾಯಕ ನಿರ್ದೇಶಕರಾಗಿ ಜೋಡಿಯಾಗಿ  ದುಡಿವ ಅವಕಾಶ. 

ಎ.ಸಿ.ನರಸಿಂಹ ಮೂರ್ತಿ ಅವರೊಂದಿಗೆ ಸೇರಿ ಸಂಧ್ಯಾರಾಗ (1960) ಚಿತ್ರವನ್ನು ಸಂಯುಕ್ತವಾಗಿ ಭಗವಾನ್ ನಿರ್ದೇಶಿಸಿದರು. ಅದಾದ ನಂತರ ಎ.ಸಿ.ನರಸಿಂಹಮೂರ್ತಿ ಮತ್ತು ಭಗವಾನ್ ರಾಜದುರ್ಗ ರಹಸ್ಯ ಚಿತ್ರ ನಿರ್ದೇಶಿಸಿದರು.

1968-ದೊರೈಭಗವಾನ್ ಕೂಡಿ ಜೇಡರ ಬಲೆ ಚಿತ್ರ ನಿರ್ದೇಶಿಸಿದರು. ಬಾಂಡ್ ಶೈಲಿಯ ಚಲನಚಿತ್ರ ನಿರ್ಮಾಣಕ್ಕೆ ನಾಂದಿ ಹಾಡಿದರು. ಅನಂತರ ಈ ಜೋಡಿಯ ಸಾಹಸ-ಯಶಸ್ಸಿನ ಗಾಥೆ ಸಾಗಿತು. ಗೋವಾದಲ್ಲಿ ಸಿ.ಐ.ಡಿ 999, ಆಪರೇಷನ್ ಜಾಕ್ ಪಾಟ್ ಚಿತ್ರಗಳನ್ನು ನಿರ್ದೇಶಿಸಿದರು. ಮನೆಮಂದಿ ಕುಳಿತು ನೋಡಬಹುದಾದ ನವಿರಾದ ಹಾಸ್ಯ, ಶ್ರಾವ್ಯ ಗೀತೆಗಳಿಂದ ಕೂಡಿದ ಅನೇಕ ಚಿತ್ರಗಳನ್ನೂ ಈ ಜೋಡಿ ನಿರ್ಮಿಸಿ ನಿರ್ದೇಶಿಸಿದರು. ಮಾಂಗಲ್ಯ ಬಂಧನ ಭಗವಾನ್ ಒಬ್ಬರೇ ನಿರ್ದೇಶಿಸಿದ ಚಿತ್ರ. ರಾಜ್‍ಕುಮಾರ್ ಅವರಿಗೆ ಭಗವಾನ್ ಆತ್ಮೀಯರು. ದೊರೈ ಭಗವಾನ್ ಜೊತೆಯಾಗಿ ರಾಜ್‍ಕುಮಾರ್ ಅಭಿನಯದ 19 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಕೃಷಮೂರ್ತಿ ಪುರಾಣಿಕರ ಧರ್ಮದೇವತೆ ಕಾದಂಬರಿ ಆಧಾರಿತ ಕರುಣೆಯೇ ಕುಟುಂಬದ ಕಣ್ಣು (1962) ಚಿತ್ರದ ಸಹ ನಿರ್ದೇಶಕರಾಗಿದ್ದ ಎಸ್.ಕೆ. ಭಗವಾನ್ ಮಂದೆ ದೊರೈರಾಜ್ ಜೊತೆಯಲ್ಲಿ ಸೇರಿ ನಿರ್ದೇಶಿಸಿದ ಒಟ್ಟು 48 ಚಿತ್ರಗಳಲ್ಲಿ 30 ಚಿತ್ರಗಳು ಕಾದಂಬರಿ ಆಧಾರಿತವಾದುದು ಎಂಬುದು ಗಮನೀಯ ಅಂಶ. ಭಗವಾನ್ ಸಹ ನಿರ್ದೇಶನದ  ಚಂದವಳ್ಳಿಯ ತೋಟ ಮತ್ತು ಅವರೇ ಸ್ವತಂತ್ರವಾಗಿ ನಿರ್ದೇಶಿಸಿದ ಸಂಧ್ಯಾರಾಗಕ್ಕೆ ಕೇಂದ್ರ ಸರಕಾರದ ರಜತ ಪದಕ ಗೌರವ ಸಂದಿದೆ. ಸಂಧ್ಯಾರಾಗ ಚಂದನದ ಗೊಂಬೆ, ಮುನಿಯನ ಮಾದರಿ, ಜೀವನ ಚೈತ್ರ, ಹೊಸಬೆಳಕು, ಚಿತ್ರಗಳಿಗೆ ರಾಜ್ಯ ಸರಕಾರದ ಶ್ರೇಷ್ಠ ಚಿತ್ರ ಹಾಗೂ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯ ಗೌರವ ಸಂದಿದೆ. 

ಚಿತ್ರರಂಗದ ಸಂಪರ್ಕ ಬಂದ ಮೇಲೂ ಭಗವಾನ್ ಅಭಿನಯದಿಂದ ದೂರ ಸರಿದಿಲ್ಲ. ನಾಯಕನಿಂದ ಹಿಡಿದು ಪುಡಿ ಪಾತ್ರಗಳವರೆಗೆ ಎಲ್ಲ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳ ಸೂತ್ರದಲ್ಲಿ ನಾಯಕ, ಭಾಗ್ಯೋದಯದಲ್ಲಿ ಉಪನಾಯಕ, ಬೆಂಗಳೂರು ಮೆಯಲ್‍ನಲ್ಲಿ ಖಳನಾಯಕ, ಕಾಡಿರಂಗಣ್ಣ, ಹೊಸಬೆಳಕು, ವಸಂತಗೀತೆ, ಮತ್ತಿತರ ಚಿತ್ರಗಳಲ್ಲಿ ಮುಖ್ಯವಾದ ಪಾತ್ರಗಳಲ್ಲಿ ಆದಿತ್ಯ ಸೂತ್ರಧಾರ ಚಿತ್ರಗಳಲ್ಲಿ ನಾಯಕನ ತಂದೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪುಡಿ ಪಾತ್ರಗಳು ಅನೇಕ. 

ಅತ್ತಿಗೆ ಮತ್ತು ಊರ್ವಶಿ, ಭಗವಾನ್ ನಿರ್ಮಾಣದ ಜನಪ್ರಿಯ ಕಿರುತೆರೆ ಧಾರವಾಹಿಗಳು. ಕೇಂದ್ರ ಸರ್ಕಾರದ ಚಲನಚಿತ್ರ ವಿಭಾಗಕ್ಕಾಗಿ ಡಾ||ರಾಜಕುಮಾರ್ ಜೀವನ ಸಾಧನೆ ಕುರಿತ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ದೊರೆತಿದೆ. ಈ ಸಾಕ್ಷ್ಯಚಿತ್ರವಲ್ಲದೆ ರಾಜ್ಯ ಸರಕಾರ ಹಾಗೂ ಸಂಸ್ಥೆಗಳಿಗಾಗಿ ಕೆಲವು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. 
ಪ್ರಸ್ತುತ ಆದರ್ಶ ಫಿಲಂ ಇನ್‍ಸ್ಟಿಟ್ಯೂಟ್‍ನ ಪ್ರಾಂಶುಪಾಲರಾಗಿರುವ ಭಗವಾನ್ ಹೊಟೇಲ್ ಉದ್ಯಮದಲ್ಲಿಯೂ ತೊಡಗಿರುವವರು. ವೃತ್ತಿ ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಚಲನಚಿತ್ರ ಕ್ಷೇತ್ರಕ್ಕೆ ದೊರೈ-ಭಗವಾನ್ ಜೋಡಿ ನೀಡಿರುವ ಅಮೂಲ್ಯ ಕೊಡುಗೆಗಾಗಿ ರಾಜ್ಯ ಸರಕಾರ 1995-96ನೇ ಸಾಲಿನ ಲಕ್ಷ ರೂಪಾಯಿ ಮೌಲ್ಯದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿದೆ.
(ನೋಡಿ- ದೊರೈರಾಜ್,-ಬಿ)						
	(ಶ್ರೀಕೃಪಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ